Wednesday, December 12, 2007

ಬೆಂಗಳೂರ್ ಬೆಂಗಳೂರ್ -ಒಂದು

ನೋಡಿ ಸ್ವಾಮಿ ನಾವ್ ಇರೋದು ಹೀಗೆ !!!
ಹಾಡು ಕೇಳಿರಬೇಕು ಅಲ್ವ?

ನಮ್ಮ ಗೆಳೆಯರು ಶುದ್ಧ ಪರಿಶುದ್ಧ ಕನ್ನಡದಲ್ಲಿ ಪೋಸ್ಟ್ ಮಾಡಿದ್ರೆ ಏನಂತೆ?

ನಾನಿದಿನಲ್ಲ ನಿಮ್ ಪ್ರೊಫೆಸರ್ ಹುಚ್ಚುರಾಯ
ಇತ್ತೀಚೆಗೆ ಒಂದ್ ಮಾತು ಕೇಳ್ದೆ ..
ಬೆಂಗಳೂರಿನಲ್ಲಿ ಮುಂದಿನ ವರ್ಷ ಮಂಜು ಬೀಳತ್ತಾ ? ಒಂದ್ ೧೦ ವರ್ಷಕ್ಕೆ ಇಲ್ಲಿ ಬೀಚ್ ಇರತ್ತಾ ಅಂತ?
ಎಲ್ಡು ಮುದ ನೀಡೊ ಮಾತೆ ಸರಿ. ಅದ್ರೆ ಬೀಚ್ ಬೆಂಗಳೂರಿಗೆ ಬರಬೇಕು ಅಂದ್ರೆ ಈಗಾಗಲೇ ಮಿತಿ ಮೀರಿರೋ ಸ್ಥಿತಿ ಇನ್ನೆಷ್ಟು ಹದಗೆಡ್ಬೇಕು ಅಂತ ಬೇಜಾರ್ ಆಯ್ತು.

ಯಾರಿಗ್ ಬೀಕ್ರಿ ಮಂಜು ಬೀಚು? ಬೇಕಾದ್ರೆ ಒಂದ್ ಎರಡ್ ದಿವ್ಸ ಎಲ್ಲಾದ್ರು ಹೋಗಿ ಬರೋಣ,
ಸೂಪರಾಗಿರೋ ಬೆಂಗಳೂರನ್ನ ಯಾಕ್ರೀ ಕೆಡಸಬೇಕು?

ನಮ್ಮ ಬಳಗಕ್ಕೆ ಯಾರಾದ್ರು ನಗಿಸೋರು ಬಂದ್ರೆ ಚನಾಗಿರುತ್ತೆ.
ಪ್ರೇಮ ಕವನ, ಪುಸ್ತಕ ವಿಮರ್ಶೆ, ತಮ್ಮದೇ ಕಥೆಗಳನ್ನೂ ಕಳಿಸಿದ್ರೆ ಚನಾಗಿರುತ್ತೆ.

ಬರಿ ಇದೆ ಸೀರಿಯಸ್ ಗೊಳ್ ಯಾರಿಗ್ ಬೇಕು ಹೇಳಿ ?

ಮತ್ತೆ ಸಿಗಣ...
ಅಲ್ಲಿ ತನಕ
ಭಾಷೆ ಬೆಳೆಸಿ, ಊಟ ಮಾಡಿ, ಸಖತ್ತಾಗಿರಿ..


----------------
Now playing: Manasa Sarovara-spb hits

Wednesday, December 5, 2007

ಬೆಂಗಳೂರಲ್ಲಿ ಮಂಜಿನ ಮಳೆಯಾದರೆ....?

ಈ ಲೇಖನ ಓದಿ....
ಏನಾದರೂ ಯಡವಟ್ಟು ಮಾಡಿದ್ದರೆ....
ನಿಮಗೆನನಿಸಿತು ಅಂತ ಖಂಡಿತ ತಿಳಿಸಿ............


ಮುಂಜಾನೆ ಕನಸಿನ ಲೋಕದಿಂದ ಎದ್ದು, ಕಣ್ಣು ಉಜ್ಜುತ್ತ ಆಫೀಸಿಗೆ ತಯಾರಾಗಿ ಹೋಗುವುದೆಂದರೆ ಸ್ವರ್ಗವನ್ನು ನನ್ನಿಂದ ಯಾರೋ ಕಿತ್ತುಕೊಂಡ ಹಾಗೆ.
ಮೊನ್ನೆಯೂ ಎಂದಿನಂತೆ ಬೆಳಗಿನ ಚುಮು ಚುಮು ಚಳಿಯಲ್ಲಿ ಎದ್ದು, ತಯಾರಾಗಿ ಆಫೀಸಿನ ಬಸ್ ಹಿಡಿದೆ. ಯಾಕೋ ಎಂದಿನಂತೆ ಆ ಹೊತ್ತು ಬಸ್ ಹತ್ತಿದ ಕೂಡಲೇ ಕಣ್ಣು ಮುಚ್ಚಲಿಲ್ಲ…
ರೇಡಿಯೊದಲ್ಲಿ ಒಂದು ಇಂಪಾದ ಹಾಡು ತೇಲಿ ಬಂದು, ಹೆಬ್ಬಾಳದ ಫ್ಲೈ ಓವರ್ ಮೇಲೆ ಬಸ್ ಹೋಗುತ್ತಿರುವಾಗ ನಮ್ಮ ಹೆಬ್ಬಾಳದ ಕೆರೆ ನನಗೆ ಕಾಶ್ಮೀರದ ದಾಲ್ ಲೇಕ್ ನಂತೆ ಭಾಸವಾಯಿತು.
ಅಷ್ಟು ಬೆಳಗ್ಗೆ ಟ್ರ್ಯಾಫಿಕ್ ಇರದ ಫ್ಲೈ ಓವರ್ ಮೇಲೆ ನಮ್ಮ ಗಾಡಿ ಹೋಗುತ್ತಿರಲು, ಎಡಗಡೆ ಕೆರೆಯಲ್ಲಿದ್ದ ಆ ಹಸಿರು ಮತ್ತು ನೀರು ಕಣ್ತುಂಬಿತು.
ಆ ಪ್ರಶಾಂತವಾದ ನೋಟ ನನ್ನ ಮನಸ್ಸನ್ನು ಎಲ್ಲೋ ಎಳೆದು ಕರೆದೋಯ್ತು.
ಒಮ್ಮೆ ಕಣ್ಮುಚ್ಚಿದೆ…..
ಆ ನೀರು, ನಿಷ್ಕಲವಾಗಿ ಧ್ಯಾನ ಮಾಡುತ್ತಿರುವಂತ ನೀರಿನ ಮೇಲಿನ ಆಕಾಶದ ಪ್ರತಿಬಿಂಬ…. ಮೂಕ ಪ್ರೇಕ್ಷಕರಂತೆ ನಿಂತ ಆ ಚಿಕ್ಕ ಸರೋವರದ ಮರಗಳು….. ಅಲ್ಲಲ್ಲೇ ಹಾರಾಡುತ್ತಿರುವ ಬೆಳ್ಳಕ್ಕಿ…..ನನಗೆ ನಿಸರ್ಗವೇ ನನ್ನ ಬಳಿ ಬಂದಂತೆ ಭಾಸವಾತು.
ಹಾಗೆಯೇ ನನ್ನ ಲೋಕದಲ್ಲಿ ವಿಹರಿಸುತ್ತಿರಲು ರಡಿಯೋ ನಲ್ಲಿ 'ಫನಾ' ಚಿತ್ರದ 'ಚಾಂದ್ ಸಿಫಾರಿಶ್ ...' ಹಾಡು ಮೂಡಿಬಂದು ನನಗೆ ಒಂದು ಹೊಚ್ಚನೆಯ ಬೆಚ್ಚನೆಯ ಅನುಭವ ತಂದು ಆ ಚಿತ್ರದಲ್ಲಿನ ಕಾಶ್ಮೀರದ ಮಂಜನ್ನು ನನ್ನ ಕಣ್ಮುಂದೆ ತಂದು ನಿಲ್ಲಿಸಿತು.
ಎಲೆಯ ಮೇಲಿನ ಹನಿ ಹನಿ ಇಬ್ಬನಿ ನನಗೆ ಹಿಮವಾಗಿ ಗೋಚರಿಸಿ ಎಂದೂ ಕಾಣದ ಒಂದು ಆಸೆ ತಂದಿತು. ಬೆಂಗಳೂರಿನಲ್ಲಿ ಮಂಜಿನ ಮಳೆಯಾದರೆ...???
ಆ ಒಂದು ಆಲೋಚನೆಯೇ ನನ್ನ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿ, ಕಣ್ತೆರೆದೇ ಕನಸಿಗೆ ಎಳೆದೋಯ್ತು…..
ನಮ್ಮ ಲಾಲ್ ಬ್ಯಾಗ್ ನಲ್ಲಿ ಹೂಗಳ ಮೇಲೆ ಬಿಳಿ ಮಂಜಿನ ಸಾಲೆ,
ಮಂಜಿನ ಮಳೆಯಲ್ಲಿ ತೊಯ್ದ ಹೆಣ್ಣು ಮಗಳಂತೆ ಕಂಡ ವಿಧಾನಸೌಧ…..
ಬಿಳಿ ಮಂಜಿಗೆ ಸ್ಪರ್ಧೆಯ ಒಡ್ದುವಂತೆ ನಮ್ಮ ಕೆಂಪು ಹೈ ಕೋರ್ಟ್…..
ಕಪ್ಪನೆಯ ರೋಡ್ ಮೇಲೆ ಹತ್ತಿಯಂತೆ ಬಿದ್ದ ಮಂಜಿನ ರಾಶಿ…..
ನಾನು ಹಾಗೆ ಸಾಗುತಿರಲು…. ಅಲ್ಲೇ ಪಕ್ಕದ ಶಾಲೆಯಿಂದ ಹೊರ ಓಡಿ ಬಂದು ಆಟವಾಡುತ್ತಿರುವ ಮಕ್ಕಳು….
ಮನೆಯ ಕಿಟಕಿ ತೆರೆದು ಸೊಗಸನ್ನು ಅನುಭವಿಸುತ್ತಿರುವ ಹೆಣ್ಣು, ಗಂಡು……
ಆರಾಮ ಕುರ್ಚಿ ಮೇಲೆ ಶಾಲು ಹೊದ್ದು , ಬೆಚ್ಚಗೆ ಕಾಫೀ ಹೀರುತ್ತ ಕೂತ ಅಜ್ಜನಿಗೆ ಹೋಗಿ ಸ್ವಲ್ಪ ಮಂಜನ್ನು ಕೆನ್ನೆಗೆ ಬಳಿಯ ಬೇಕೆನಿಸಿತು.
ಹಾಗೆ ಮುಂದಕ್ಕೆ ಸಾಗಿ….ಮುಸ್ಸಂಜೆ ಮೂಡುತ್ತಿರಲು, ಕಡಲೆ ಕಾಯಿ ಹುರಿಯಲು ಬೆಂಕಿ ಹಚ್ಚಲು ಕಷ್ಟ ಪಡುತ್ತಿರುವ ಕಡಲೆ ವ್ಯಾಪಾರೀ……
ಅಲ್ಲೇ ನಿಂತು ಜೋಳ ಮಾರುತ್ತಿರುವವನ ಬಳಿ ಜೋಳ ಕೊಂಡ ನಾನು, ಹಾಗೆ ಮಂಜಿನಿಂದಾಗಿ ಕಮ್ಮಿ ಇದ್ದ ಎಂ ಜಿ ರೋಡಿನ, ಮೇಲೆ ನಡೆಡಾದಿದೆ….. ಎಲ್ಲರೂ ಸ್ವರ್ಗ ಇಲ್ಲೇ ಎನ್ನುವಂತೆ ತಮ್ಮ ಕೈಚಾಚಿ ಮಂಜನ್ನು ಅಪ್ಪಿದ್ದನ್ನು ಕಂಡು ಖುಷಿ ಪಟ್ಟೆ….
ಕತ್ಟಳಾಗುತ್ತಿದ್ದಂತೆ ಜಗಮಗಿಸುವ ದೀಪಗಳು ಹೊತ್ತಿಕೊಂಡವು….
ಮಂಜಿನ ಹುಚ್ಚಿಂದ ತೊಯ್ದ ಜನರಿಗೆ ಶೀತ ಶುರುವಾಯ್ತೇನೋ…
ಯಾರೋ “ಆಆಕ್ಷಿ” ಅಂದಾಗ, ಕಣ್ಣು ತೆರೆದು…. ನೋಡಿದೆ… ನಾನಾಗಲೇ ಆಫೀಸಿನ ಬಳಿ ಬಂದು ತಲುಪಿದ್ದೆ…..
"ಛೇ ಬಳಿ ಮಳೆಯು ಬಾರದ ಈ ಚಳಿಗಾಲದಲ್ಲಿ ಮಂಜಿನ ಮಳೇನ ಕನವರಿಸುತ್ತಿದ್ದೀನಲ್ಲ" ಅಂತ ನನ್ನ ತಲೆಗೆ ನಾನೇ ಹೊಡೆದುಕೊಂಡೆ
ಆದರೆ… ನನ್ನ ಆ ಹುಚ್ಚು ಆಸೆ ಮಾತ್ರ ಹೋಗಲಿಲ್ಲ….. “ಬೆಂಗಳೂರಿನಲ್ಲಿ ಮಂಜಿನ ಮಳೆಯಾಗಬಾರಾದೆ?”
ಎರಡು ದಿನ ಹೀಗೆ ಇದ್ದೇ…..
ಇಂದು ಮಧ್ಯಾನ ಊಟದ ನಂತರ ವಿಹರಿಸುತ್ತಾ ಆಕಾಶದ ಕಡೆ ನೋಡಿದೆ…
ಯಾಕೋ ನನ್ನ ಕನ್ನಡಕ ಸ್ವಲ್ಪ ಮಂಜಾಗಿದೆ ಎಂದು ತಿಳಿದು ಉಜ್ಜಿದೆ….
ಇಲ್ಲ ....ಮೋಡ ಆವರಿಸಿ ಸ್ವಲ್ಪ ಮಸುಕಾಗಿತ್ತು ಅಷ್ಟೇ…..
ಮತ್ತೆ ಮಂಜಿನ ಯೋಚನೆ ಬಂದಿತು, ಆದರೆ ದೇವರು ನನ್ನ ಆಸೆಗೆ ಸ್ವಲ್ಪ ಬೆಲೆ ಕೊಟ್ಟು ಚಿಕ್ಕ ಚಿಕ್ಕ ಮಳೆ ಹನಿಯನ್ನ ನನ್ನ ಮುಡಿಗೇರಿಸಿದ….
ಮಂಜಿಲ್ಲದಿದ್ದರೇನಂತೆ??? ಮಳೆಯಾದರು ಇದೆಯಲ್ಲಾ ಎಂದೂ ಆ ಹನಿ ಮಿಶ್ರಿತ ತಂಗಾಳಿಯಲ್ಲಿ ನನ್ನ ಕೂದಲನ್ನು ಹಾರಿಸುತ್ತಾ ಹೆಜ್ಜೆಹಾಕಿದೆ….
ನೀವೇನಂತೀರಿ?ಮಂಜು ಬೇಕಲ್ಲವೇ... ಒಂದು ದಿನದ ಅತಿಥಿಯಾಗಿ..... :)

Sunday, December 2, 2007

ಹಸಿರು ಪ್ರಯಾಣ - Green trek.

ಒಂದು ಹೊಸ ಅನುಭವ. ಹಸಿರು ದಾರಿಯಲ್ಲಿ ಕಾಲು ಹಾಯ್ದು ಹೋಗುತ್ತಿದ್ದಂತೆ ಮನಸ್ಸು ಒಂದು ಸುಂದರ ಲೋಕವನ್ನು ಪ್ರವೇಶಿಸಿತ್ತು. ಆಹಾ "ಸ್ವರ್ಗವೇ ಧರೆಗಿಳಿಯಿತು" ಎಂಬ ಮಾತಿನ ಅನುಭವ ಅಂದು ನನಗೆ ಆಯಿತು. ನಾನು ಮಾತನಾಡುತಿರುವುದು ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯಕ್ಕೆ ಹೋಗುವ ದಾರಿಯ ಬಗ್ಗೆ. ಇಂದು ಮುಜಾನೆ ದಿನ ಪತ್ರಿಕೆಯಲ್ಲಿ ಡಿಸೆಂಬರ್ ೮ರಿಂದ ರೈಲುಗಳು ಈ ಮಾರ್ಗವಾಗಿ ಹೋಗಲಿದೆ ಎಂದು ತಿಳಿದೊಡನೆ ನಾನು ನಿಜವಾಗಿಯು ಕಳೆದ ತಿಂಗಳು ಈ ಮಾರ್ಗವಾಗಿ ನಡೆದು ಹೋದದ್ದು ನೆನಪಾಯಿತು. ಸುಮಾರು ೫೦ ಕಿಲೋಮೀಟರು ನಡೆದಿರಬಹುದು. ಎರಡು ದಿನ ಈ ಪಟ್ಟಣದ ದೊಮ್ಬಿಯಿಂದ ದೂರ ಪ್ರಶಾಂತ ವಾತಾವರಣದಲ್ಲಿ ನಮ್ಮದೇ ಆದ ಸುಂದರ ಲೋಕವನ್ನು ಸೃಷ್ಟಿಸಿ ಕೊಂಡಿದ್ದೆವು. ಅದು ರೈಲು ಮಾರ್ಗ. ಈಗ ಅಲ್ಲಿ ಮತ್ತೆ ನಡೆದುಕೊಂಡು ಹೋಗಲು ಅನುಮತಿ ನೀಡುವುದು ಅನುಮಾನವೇ. ಯಾಕೆಂದರೆ ನಾವು ಹೋಗುವಾಗ ಬರಿ ಗೂಡ್ಸ್ ರೈಲುಗಳು ಸಂಚಾರವಿತ್ತು. ಈಗ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಕರ ರೈಲುಗಳ ಪ್ರವಾಸ ಆರಂಭವಾಗಲಿದೆ. ಆದರೆ ಆ ದಾರಿಯಲ್ಲಿ ಇರುವಂಥ ಪ್ರಕೃತಿ ಸೌಂದರ್ಯ ಕಣ್ಣಿಗೆ ತಂಪನ್ನು ನೀಡಿತು. ಇದು ನನ್ನ ಕನಸುಗಳಲ್ಲಿ ಒಂದಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಮಳೆಗಾಲ ಆಗತಾನೆ ಮಳೆಗಾಲ ಮುಗಿಯುತಿದ್ದರಿಂದ ಕಾಡಿನಿಂದ ನೀರು ಹರಿದು ಚಿಕ್ಕ ಜಲಪಾತಗಳು ಸೃಷ್ಟಿಯಾಗಿ ಪ್ರಯಾಣದ ಆಯಾಸವನ್ನು ನೀಗಿಸಲು ಅನುಕೂಲ ಮಾಡಿಕೊಟ್ಟಿತು ಆ ಪ್ರಕೃತಿ. ಆ ೨೫೦ ಅಡಿ ಎತ್ತರದ ಸೇತುವೆಗಳ ಮೇಲೆ ನಡೆದು ಹೋಗುತ್ತಿದಂತೆ ಒಂದು ಹೊಸ ರೀತಿಯ ರೋಮಾಂಚನ ತನುಮನಗಲ್ಲನ್ನು ಆವರಿಸ್ತು. ರೈಲುಬಂದರೆ ಗತಿಯೇನು ಎಂದು ಯೋಚಿಸಲು ಆಸದ್ಯವಾಗುವಸ್ತು ಸಂತೋಷ ಮನಸನ್ನು ತುಂಬಿತ್ತು. ದೋಣಿಗಲ್ ನಿಂದ ಹೊರಟಾಗ ಎಲ್ಲರು ನಾವು ಕುಕ್ಕೆ ಯನ್ನು ಮುಟ್ಟುವುದು ಬರಿಗಾಲಿನಲ್ಲಿ ಮುಟ್ಟುವುದು ಅಸಾಧ್ಯ ಎಂದು ಹೇಳಿದರು. ಆದರೆ ನಾವು ಅವರನ್ನು ತಪ್ಪುಗಳೆದೆವು. ಆ ಸೌಂದರ್ಯ ನಾವು ದಿಕ್ಕರಿಸಿ ಬರುವಂಥಹ ಮನಸ್ಸು ನಮಗೆ ಇರಲಿಲ್ಲ. ಹಾಗಾಗಿ ೫೦ ಕಿಲೋಮೀಟರು ನಡೆದರೂ ಆ ದಣಿವಿನಲ್ಲಿ ಒಂದು ಸಂತಸ, ಸಮಾಧಾನ ಹಾಗು ಸಾಧನೆಯ ಭಾವವಿತ್ತು. ಮತ್ತೆ ಆ ದಾರಿಯಲ್ಲಿ ಹೋಗುವುದು ಕಚಿತ ಆದರೆ ಅದು ಉಗಿಬಂಡಿಯ ಪ್ರಯಾಣ ಆಗಬೇಕೇ ಹೊರತು, ಆ ದಾರಿಯಲ್ಲಿ ನಡೆಯುವ ಸದಾವಕಾಶ ದೊರಕುವುದು ಕಷ್ಟ. ಒಂದು ಬಾರಿಯಾದರೂ ಹೋಗಿದ್ದೆ ಎಂಬ ಸಮಾಧಾನ. ಇಲ್ಲಿಗೆ ನನ್ನ ಪ್ರಯಾಣದ ಕಥೆಯನ್ನು ಮುಗಿಸುಥೆನೆ. ಮತ್ತೆ ಹೊಸ ವಿಚಾರಗಳೊಂದಿಗೆ ಭೇಟಿಯಾಗೋಣ. ನಮಸ್ಕಾರ.

Saturday, December 1, 2007

ಭಾಷೆಯ ಒಲವು.

ಸಮಯದ ಕೊರತೆಯಿಂದ ನಮ್ಮ ಮಿತ್ರರು ತಮ್ಮ ಬರವಣಿಗೆಗಳನ್ನು ಪ್ರಕಟಗೊಳಿಸಿಲ್ಲವೆನಿಸುತ್ತದೆ.
ಹಾಗಾದರೆ ಶ್ರೀ ಗಣೇಶ ನನ್ನಿ೦ದಲೆ ಆಗಲಿ.

ನಮಸ್ಕಾರ.
ಇತ್ತೀಚೆಗೆ ಕನ್ನಡ ಪರ ಸಂಘಟನೆಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೇರಿದ್ದರು. ಅಷ್ಟೆಲ್ಲ ಭಾಷೆಯ ಬಗ್ಗೆ ಹೌಹಾರಿದರೂ ಇಂದು ಕನ್ನಡಕ್ಕೆ ಪ್ರಾಶಸ್ತ್ಯ ದೊರಕಿಲ್ಲ.

ದೆಹಲಿಯ ವರ್ತಕರಿಂದ ಕಲಿಯಬೇಕಾದ ಒಂದು ಸಣ್ಣ ಪಾಠವಿದೆ : ತಮ್ಮ ತಮ್ಮ ಅಂಗಡಿಗಳಲ್ಲಿ ಅವರು : hindi speakers will be given first preference ಅಂತ ದೊಡ್ಡದಾದ ಫಲಕವನ್ನು ಪ್ರದರ್ಶಿಸಿರುತ್ತಾರೆ. ಎಲ್ಲಿಗೆ ಹೋಗಿ, ಯಾರೊಡನೆಯು ಹಿಂದಿಯಲ್ಲಿ ಮಾತನಾಡಿಸಿದರೆ/ಮಾತನಾಡಿಸಲು ಪ್ರಯತ್ನ ಮಾಡಿದರೆ ನಿಮಗೆ ಧಾರಾಳವಾಗಿ ಸ್ಪಂದಿಸುವರು. ಹಿಂದಿ ಬಂದರು, ಮಾತನಾಡದೆ ಇಂಗ್ಲಿಶಿನಲ್ಲೋ ಮತ್ತಯವುದೋ ಭಾಷೆಯಲ್ಲೋ ಮಾತನಾಡಿಸಿದರೆ ಕಾಣಿಸಿದರು ಕಾಣದಂತೆ ಮುನ್ನಡೆಯುತ್ತಾರೆ.

ನಮ್ಮ ಬೆಂಗಳೂರಿನಲ್ಲಿ ಹಾಗಲ್ಲ, ನೀವು ಯಾವ ಭಾಷೆಯಲ್ಲೇ ಪ್ರಶ್ನೆ ಕೇಳಿರಿ, ನಿಮಗೆ ಇಂಗ್ಲಿಷ್ನಲ್ಲೇ ಉತ್ತರ ಸಿಗುತ್ತೆ.
ಈ ಪರಿಸ್ಥಿತಿ ಇರುವುದೇಕೆ೦ದರೆ ನಾವು ಪಾಠಶಾಲೆಗಳಲ್ಲಿ ಕನ್ನಡ ಕಲಿತೆವೆ ಹೊರತು ಅದನ್ನು ಪ್ರೀತಿಸಲ್ಲಿಲ್ಲ. ನಾವು ಇದನ್ನು ಬದಲಾಯಿಸಲೇ ಬೇಕು. ಯೆನ೦ತಿರ?


ಆದರು ನನಗೆ ಕನ್ನಡದ ಪ್ರೀತಿ ಹುಟ್ಟಿಸಿದ ಶ್ರೀ ಗುರುರಾಜ್, ಶ್ರೀ ಕೃಷ್ಣಮೂರ್ತಿ, ಶ್ರೀ ಶ್ರೀನಿವಾಸ ಶರ್ಮ.
ಇವರೆಲ್ಲರೂ ಕನ್ನಡವನ್ನು ವಿಷಯವೆಂದು ಭಾವಿಸದೆ ಅದನ್ನು ಹಾಡಿ, ನಟಿಸಿ, ಕುಣಿದು-ಕುಪ್ಪಳಿಸಿ ಮನವರಿಕೆ ಮಾಡಿಕೊಟ್ಟು, ಕನ್ನಡ ಅಭಿಮಾನ ಮತ್ತೆ ಅದರ ಸುಗಂಧವನ್ನು ಮತ್ತಷ್ಟು ದೂರ ಸಾರಿದವರು.
ಅವರನ್ನು ನಾನು ಇಲ್ಲಿ ನೆನಯುತ್ತೇನೆ. ಇಂತಹ ಒಳ್ಳೆಯ ಶಿಕ್ಷಕರನ್ನು ದಿನನಿತ್ಯ ನೆನೆದರೆ ತಪ್ಪಾಗಲಾರದು.

ಇವರ ಶಿಷ್ಯರಾಗಿ ನಾವು ಕನ್ನಡವನ್ನು ದಿನನಿತ್ಯ ಪ್ರಯೋಗಿಸಿದರೆ ನಮ್ಮ ಕರ್ತವ್ಯ ಮಾಡಿದಂತೆ ಆಗುತ್ತದೆ.

ಮು೦ದಿನ ಸಂಚಿಕೆಯ ವರೆಗೆ ಕಾದು ನೋಡಿ.

ನಿಮ್ಮ ಆದಿತ್ಯ

----------------
Now playing: 23 - Ananda
http://foxytunes.com/artist/23/track/ananda

Monday, November 26, 2007

ಶೀಘ್ರದಲ್ಲೇ ಎಲ್ಲರು ತಮ್ಮ ತಮ್ಮ ಅನಿಸಿಕೆಗಳನ್ನು ಇಲ್ಲಿ ವ್ಯಕ್ತ ಪಡಿಸುತ್ತಾರೆ.
ಕಾದು ನೋಡಿ, ಓದಿ ಆನಂದಿಸಿ...

ನಿಮ್ಮ ವಿಶ್ವಾಸಿ

ಆದಿತ್ಯ



----------------
Now playing: saviyo
http://foxytunes.com/artist/-/track/saviyo